ಕೀಟಭಕ್ಷಕ ಸಸ್ಯಗಳು

 ಕೀಟ ವಿವಿಧ ಬಗೆಯ ಡಿಂಭಗಳು, ಕ್ರಿಮಿಗಳು ಮುಂತಾದವನ್ನು ಸೆರೆಹಿಡಿದು, ಕಬಳಿಸಿ, ಜೀರ್ಣಿಸಿಕೊಳ್ಳುವ ಸಸ್ಯಗಳು. (ಇನ್ಸೆಕ್ಟಿವೊರಸ್ ಪ್ಲಾಂಟ್ಸ್). ಇವು ತಮಗೆ ಬೇಕಾದ ಸಾರಜನಕಯುಕ್ತ ಆಹಾರವನ್ನು ಈ ವಿಧಾನದಿಂದ ಪೂರೈಸಿಕೊಳ್ಳುತ್ತವೆ. ಬಹುಪಾಲು ಸಸ್ಯಗಳಿಗೆ ಭೂಮಿಯೇ ಸಾರಜನಕದ ಮೂಲ. ಅವು ತಮ್ಮ ಬೇರಿನ ಸಹಾಯದಿಂದ ಭೂಮಿಯಲ್ಲಿ ವಿವಿಧ ರೂಪದಲ್ಲಿರುವ ಸಾರಜನಕವನ್ನು ಹೀರಿಕೊಳ್ಳುತ್ತವೆ. ಆದರೆ ಕೀಟಭಕ್ಷಕ ಸಸ್ಯಗಳು ಸಾಮಾನ್ಯವಾಗಿ ಯಾವಾಗಲೂ ನೀರು ನಿಂತಿರುವ, ಸಾರಜನಕ ಕಡಿಮೆಯಿರುವ ಜೌಗು ಪ್ರದೇಶಗಳಲ್ಲಿ ಬೆಳೆಯುವುದರಿಂದ ಅವಕ್ಕೆ ಸಾರಜನಕದ ಕೊರತೆಯಿರುತ್ತದೆ. ಅಲ್ಲದೆ ಇಂಥ ಪ್ರದೇಶಗಳಲ್ಲಿ ಬೆಳೆಯುವುದರಿಂದ ಅವಕ್ಕೆ ಸಾರಜನಕದ ಕೊರತೆಯಿರುತ್ತದೆ. ಅಲ್ಲದೆ ಇಂಥ ಪ್ರದೇಶಗಳ ಮಣ್ಣಿನ ಠಿಊ ಕೂಡ ಬಹಳ ಕಡಿಮೆಯಿದ್ದು ಸಾರಜನಕವನ್ನು ಸ್ಥಿರೀಕರಿಸುವ ಸಾಮಥ್ರ್ಯವುಳ್ಳ ಬ್ಯಾಕ್ಟೀರಿಯಗಳು ಇಂಥಲ್ಲಿ ನೆಲೆಸಿರುವುದಿಲ್ಲ. ಹೀಗಾಗಿ ಕೀಟಭಕ್ಷಕ ಸಸ್ಯಗಳು ಸಾರಜನಕದ ಅಭಾವಕ್ಕೊಳಗಾಗುತ್ತವೆ. ಈ ಕೊರೆಯನ್ನು ನೀಗಿಸಿಕೊಳ್ಳಲು ಇವು ಕೀಟಗಳನ್ನು ಹಿಡಿದು ಜೀರ್ಣಿಸಿಕೊಳ್ಳುತ್ತವೆ. ಕೀಟಗಳೊಂದೇ ಅಲ್ಲದೆ ಎರೆಹುಳು, ನೆಮಟೋಡ ಗುಂಪಿಗೆ ಸೇರಿದ ಪ್ರಾಣಿಗಳು, ಸಹಸ್ರಪದಿ ಮುಂತಾದ ಸಂಧಿಪದಿಗಳು, ಕಪ್ಪೆಮರಿ ಮುಂತಾದ ಪ್ರಾಣಿಗಳನ್ನೂ ಇವು ಭಕ್ಷಿಸುವುದು ಕಂಡುಬಂದಿದೆ. ಇದರಿಂದ ಇವನ್ನು ಮಾಂಸಾಹಾರಿ ಸಸ್ಯಗಳೆಂದೂ ಕರೆಯುವುದುಂಟು. ಕೀಟಭಕ್ಷಕ ಸಸ್ಯಗಳಿಗೆ ಕೀಟಗಳು ಅತ್ಯಗತ್ಯವೇನಲ್ಲ ಎಂದು ಪ್ರಾಯೋಗಿಕವಾಗಿ ತೋರಿಸಲಾಗಿದ್ದರೂ ಕೀಡಗಳ ಪೂರೈಕೆ ಇದ್ದಾಗ ಬೆಳೆದಷ್ಟು ಹುಲುಸಾಗಿ ಅವಿಲ್ಲದಾಗಿ ಬೆಳೆಯಲಾರವು.

 ಸುಮಾರು 500ಕ್ಕೂ ಮೇಲ್ಪಟ್ಟು ವಿವಿಧ ಬಗೆಯ ಕೀಟಭಕ್ಷಕ ಸಸ್ಯಗಳುಂಟು. ಇವುಗಳಲ್ಲಿ ಬಹುಪಾಲು ಹೂಬಿಡುವ ಸಸ್ಯಗಳಾಗಿದ್ದು ಪ್ರಮುಖವಾಗಿ ಡ್ರಾಸೆರೇಸೀ ಸರಸೀನಿಯೇಸೀ, ಲೆಂಟಿಬ್ಯುಲೇರಿಯೇಸೇ, ನೆಪೆಂತೇಸೀ, ಬಿಬ್ಲಿಡೇಸೀ ಮತ್ತು ಸೆಫಲೋಟೇಸೀ ಕುಟುಂಬಗಳಿಗೆ ಸೇರಿವೆ. ಕೀಟಗಳ ಹೊರಮೈಮೇಲೊ ಇಲ್ಲವೆ ಒಳಗೊ ಪರಾವಲಂಬಿಗಳಾಗಿ ಬೆಳೆಯುವ ಕೆಲವು ಶಿಲೀಂಧ್ರಗಳನ್ನೂ ಕೀಟಭಕ್ಷಕ ಸಸ್ಯಗಳೆಂದೇ ಪರಿಗಣಿಸಬಹುದಾದರೂ ಕೆಲವು ಬಗೆಯವನ್ನು ಮಾತ್ರ ಖಚಿತವಾಗಿ ಕೀಟಭಕ್ಷಕಗಳೆಂದು ಹೇಳಬಹುದು. ಇಂಥ ಶಿಲೀಂಧ್ರಗಳಲ್ಲಿ ಕೀಟಗಳನ್ನು ಸೆರೆಹಿಡಿಯುವುದಕ್ಕೆಂದಿರುವ ವಿಶಿಷ್ಟ ಬಗೆಯ ರಚನೆಗಳನ್ನು ನೋಡಬಹುದು. ಈ ಶಿಲೀಂಧ್ರಗಳಲ್ಲಿ ಮುಖ್ಯವಾದವು ಆರ್ತ್ರೊಬಾಟ್ರಿಸ್ ಆಲಿಗೋಸ್ವೊರ, ಜೂóಫೇಗಸ್ ಇನ್‍ಸಿಡಿಯನ್ಸ್ ಮತ್ತು ಸಾಮರ್‍ಸ್ವಾರ್ಫಿಯ ಸ್ವೈನೋಸ ಎಂಬ ಪ್ರಭೇದಗಳು. ಇವುಗಳ ದೇಹದಲ್ಲಿ ಸೂಕ್ಷ್ಮವಾದ ಕುಣಿಕೆಗಳಂಥ ರಚನೆಗಳಿದ್ದು ಇವುಗಳ ಸಹಾಯದಿಂದ ಶಿಲೀಂಧ್ರಗಳು ಸೂಕ್ಷ್ಮಗಾತ್ರದ ನೆಮಟೋಡ್ ಹುಳುಗಳನ್ನು ಹಿಡಿಯುತ್ತವೆ ಎಂದು ಗೊತ್ತಾಗಿದೆ.

 ಹೂಬಿಡುವ ಕೀಟಭಕ್ಷಕ ಸಸ್ಯಗಳಲ್ಲಿ ಮುಖ್ಯವಾದವು ಇವು-ಡ್ರಾಸೆರೇಸೀ ಕುಟುಂಬಕ್ಕೆ ಸೇರಿದ ಡ್ರಾಸಿರ (ಪ್ರಪಂಚದಾದ್ಯಂತ ಇದೆ), ಡ್ರಾಸೊಫಿಲಂ (ಮೆಡಿಟರೇನಿಯನ್ ಪ್ರದೇಶ, ಉತ್ತರ ಆಫ್ರಿಕ, ಮೊರಾಕೊ ದೇಶಗಳ ವಾಸಿ). ಡೈಯೋನಿಯ (ಉತ್ತರ ಅಮೆರಿಕದ ಉತ್ತರ ಕ್ಯಾರೊಲಿನ ರಾಜ್ಯದ ನಿವಾಸಿ), ಆಲ್ಡ್ರೊವ್ಯಾಂಡ (ಪಶ್ಚಿಮದಲ್ಲಿ ಐಬೀರಿಯದಿಂದ ಹಿಡಿದು ಪೂರ್ವದಲ್ಲಿ ಜಪಾನ್‍ವರೆಗೂ ವ್ಯಾಪಿಸಿದೆ), ಬಿಬ್ಲಿಡೇಸೀ ಕುಟುಂಬದ ಬಿಬ್ಲಿಸ್, ಸರಸೀನಿಯೇಸೀ ಕುಟುಂಬಕ್ಕೆ ಸೇರಿದ ಸರಸೀನಿಯ, ಡಾರ್ಲಿಂಗ್ಟೋನಿಯ (ಉತ್ತರ ಅಮೆರಿಕದ ನಿವಾಸಿಗಳು), ಹೀಲಿಯಾಂಪೋರ (ಗಯಾನ ಮತ್ತು ವೆನಿಜುóವೇಲಗಳ ನಿವಾಸಿ), ನೆಪೆಂತೇಸೀ ಕುಟುಂಬದ ನೆಪೆಂತೆಸ್ (ಸಿಂಹಳ, ಅಸ್ಸಾಂ, ಮಲಯ, ಬರ್ಮ, ಉತ್ತರ ಆಸ್ಟ್ರೇಲಿಯ, ಭಾರತದಲ್ಲಿ ಬಂಗಾಲ ಮುಂತಾದ ಪ್ರದೇಶಗಳ ನಿವಾಸಿ); ಸೆಫಲೋಟೇಸೀ ಕುಟುಂಬದ ಸೆಫಲೋಟಸ್; ಲೆಂಟಿಬ್ಯುಲೇರಿಯೇಸೀ ಕುಟುಂಬಕ್ಕೆ ಸೇರಿದ ಪಿಂಗಿಕ್ಯುಲ (ದಕ್ಷಿಣ ಅಮೆರಿಕದ ಆಂಡೀಸ್ ಪರ್ವತಶ್ರೇಣಿಯ ನಿವಾಸಿ), ಯುಟ್ರಿಕ್ಯುಲೇರಿಯ (ಪ್ರಪಂಚದಾದ್ಯಂತ ಇದರ ವ್ಯಾಪ್ತಿ ಇದೆ), ಮತ್ತು ಜೆನ್ಲಿಸಿಯ (ಆಫ್ರಿಕ ಹಾಗೂ ದಕ್ಷಿಣ ಅಮೆರಿಕದ ಉಷ್ಣಪ್ರದೇಶಗಳ ನಿವಾಸಿ).

ಎಲ್ಲ ಬಗೆಯ ಕೀಟಭಕ್ಷಕ ಸಸ್ಯಗಳಲ್ಲೂ ಎಲೆಯೇ ಕೀಟಗಳನ್ನು ಹಿಡಿಯುವ ಮತ್ತು ಜೀರ್ಣಿಸುವ ಕಾರ್ಯವನ್ನು ನಿರ್ವಹಿಸುವುದರಿಂದ, ಬಹಳ ಮುಖ್ಯವಾದ ಅಂಗವೆನಿಸಿದೆ. ಇದು ತನ್ನ ಕಾರ್ಯನಿರ್ವಹಣೆಗಾಗಿ ಅನೇಕ ರೀತಿಯಲ್ಲಿ ಮಾರ್ಪಾಡಾಗಿದ್ದು ತನ್ನ ಆಕಾರ ಹಾಗೂ ಒಳರಚನೆಯಲ್ಲಿ ವೈವಿಧ್ಯವನ್ನು ಪ್ರದರ್ಶಿಸುತ್ತದೆ. ಕೆಲವು ಬಗೆಯ ಕೀಟಭಕ್ಷಕ ಸಸ್ಯಗಳನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ.

ಡ್ರಾಸಿರ ಗಿಡದ ಎಲೆಗಳು ಹೊಳೆಯುವ ಕೆಂಪುಬಣ್ಣದವಾಗಿ ಸಣ್ಣ ಸಣ್ಣ ಚಮಚಗಳಂತಿದ್ದು ಅವುಗಳ ಮೇಲೆಲ್ಲ ಗುಂಡುಸೂಜಿಯಂಥ ಸೂಕ್ಷ್ಮವಾದ ಕೂದಲುಗಳಿವೆ (ಟಿಂಟಕಲ್ಸ್). ಒಂದೊಂದು ಕೂದಲಿನ ತುದಿಯಲ್ಲೂ ಅಂಟು  ಪದಾರ್ಥವೊಂದನ್ನು ಸ್ರವಿಸುವ ಗ್ರಂಥಿಗಳಿವೆ. ಅಂಟಿನಿಂದಾವೃತವಾದ ಈ ಕೂದಲುಗಳಿಂದಾಗಿ ಬಿಸಿಲಿನಲ್ಲಿ ಗಿಡ ಬಲುಸುಂದರವಾಗಿ ಹೊಳೆಯುತ್ತಿರುತ್ತದೆ. ಅಂಟು ಪದಾರ್ಥವನ್ನು ಮಕರಂದವೆಂದು ಭ್ರಮಿಸಿ, ಎಲೆಯ ಕೆಂಪುಬಣ್ಣದಿಂದ ಆಕರ್ಷಿತವಾಗಿ ಕೀಟಗಳು ಎಲೆಯ ಮೇಲೆ ಕುಳಿತಾಗ ಅಂಟುದ್ರವಕ್ಕೆ ಅಂಟಿಕೊಳ್ಳುತ್ತವೆ. ಕೆಲವು ಕ್ಷಣಗಳಲ್ಲಿ ಕೂದಲುಗಳೆಲ್ಲ ಕೀಟದ ಮೇಲೆ ಮುಚ್ಚಿಕೊಂಡು ಅದನ್ನು ಸೆರೆಸಿಕ್ಕಿಸಿಕೊಳ್ಳುತ್ತವೆ. ಕ್ರಮೇಣ ಜೀರ್ಣಕಾರಕ ಕಿಣ್ವಗಳನ್ನು ಸ್ರವಿಸಿ ಅದನ್ನು ಜೀರ್ಣಿಸಿ ಅದರಿಂದ ಸಾರಜನಕವನ್ನು ಹೀರಿಕೊಳ್ಳುತ್ತವೆ. ಕೀಟವೆಲ್ಲ ಜೀರ್ಣವಾದ ಅನಂತರ ಕೂದಲುಗಳು ಮತ್ತೆ ನೆಟ್ಟಗಾಗುತ್ತವೆ. ಡ್ರಾಸಿರದಲ್ಲಿ ಹಲವಾರು ಪ್ರಭೇದಗಳಿದ್ದು ಕರ್ಣಾಟಕದಲ್ಲಿ ಡ್ರಾ. ಇಂಡಿಕ, ಡ್ರಾ. ಬರ್ಮಾನಿಯೈ ಮತ್ತು ಡ್ರಾ. ಪೆಲ್ಟೇಟ ಎಂಬ ಪ್ರಭೇದಗಳು ಬೆಳೆಯುತ್ತವೆ. ಇದಕ್ಕೆ ಇಂಗ್ಲಿಷಿನಲ್ಲಿ ಸನ್‍ಡ್ಯೂ ಎಂಬ ಸಾಮಾನ್ಯ ಬಳಕೆಯ ಹೆಸರಿದೆ.

 ಯುಟ್ರಿಕ್ಯುಲೇರಿಯ ಜಾತಿ ಸಂಪೂರ್ಣ ಜಲವಾಸಿ ಇಲ್ಲವೆ ಜೌಗು ಭೂಮಿಯಲ್ಲಿ ಬೆಳೆಯುತ್ತದೆ. ಇದರಲ್ಲಿ ಎಲೆಗಳು ಬುರುಡೆಗಳಂತೆ (ಬ್ಲಾಡರ್) ಮಾರ್ಪಾಟಾಗಿವೆ. ಒಂದೊಂದರಲ್ಲೂ ಒಂದು ಕವಾಟದ್ವಾರವೂ ದ್ವಾರದ ಬಳಿ ದಟ್ಟವಾದ ಬಹುಕೋಶಮಯ ಕೂದಲುಗಳೂ ಇವೆ. ನೀರಿನಲ್ಲಿ ಈಜುವ ಡಿಂಭಗಳು, ಪ್ರೋಟೋeóÉೂೀವ ಪ್ರಾಣಿಗಳು ಇವುಗಳೊಳಕ್ಕೆ ಹೊಕ್ಕು ಸಿಕ್ಕಿಹಾಕಿಕೊಂಡು ಬಿಡುತ್ತವೆ. ಒಮ್ಮೆ ಒಳ ಹೊಕ್ಕರೆ ಮರಳಿ ಹೊರಕ್ಕೆ ಬರುವುದು ಅಸಾಧ್ಯ. ಅನಂತರ ಬುರುಡೆಯ ಒಳ ಮೈಮೇಲಿರುವ ಗ್ರಂಥಿಗಳು ಜೀರ್ಣರಸವನ್ನು ಸ್ರವಿಸಿ ಪ್ರಾಣಿಗಳನ್ನು ಅರಗಿಸಿಕೊಳ್ಳುತ್ತವೆ. ಯುಟ್ರಿಕ್ಯುಲೇರಿಯದ ಎಲೆಗಳು ಬುರುಡೆಗಳಂತಿರುವುದರಿಂದ ಇದನ್ನು ಸಾಮಾನ್ಯ ಇಂಗ್ಲಿಷಿನಲ್ಲಿ ಬ್ಲಾಡರ್‍ವರ್ಟ್ ಎನ್ನಲಾಗುತ್ತದೆ. ಇದರಲ್ಲೂ ಪ್ರಪಂಚಾದ್ಯಂತ ಸುಮಾರು 250 ಪ್ರಭೇದಗಳಿದ್ದು ಕರ್ಣಾಟಕದಲ್ಲಿ ಸುಮಾರು 14 ಪ್ರಭೇದಗಳು ಕಾಣಬರುತ್ತವೆ.

 ನೆಪೆಂತೆಸ್ ಜಾತಿ ಒಂದು ಬಗೆಯ ಬಳ್ಳಿ. ಇದರ ಎಲೆಗಳು ಕೀಟಗಳನ್ನು ಹಿಡಿಯುವುದರಲ್ಲಿ ಪರಿಪೂರ್ಣತೆಯನ್ನು ಪಡೆದಿವೆ ಎನ್ನಬಹುದು. ಎಲೆಯ ತೊಟ್ಟು ಕುಡಿಬಳ್ಳಿಯಂತಿದ್ದು ಆಸರೆಗಳನ್ನು ಹಿಡಿದು ಬೆಳೆಯಲು ಸಹಕಾರಿಯಾಗಿದೆ. ಪರ್ಣಭಾಗ (ಲೆಮೈನ) ಹೂಜಿಯಂಥ ರಚನೆಯಾಗಿ ಮಾರ್ಪಟ್ಟಿದೆ. ಇದರಿಂದಲೇ ಈ ಗಿಡಕ್ಕೆ ಇಂಗ್ಲಿಷಿನಲ್ಲಿ ಪಿಚರ್‍ಪ್ಲಾಂಟ್ ಎನ್ನುತ್ತಾರೆ. ಹೂಜಿಯ ಆಳ ಸುಮಾರು 20 ಸೆಂಮೀ. ಹೂಜಿಗೆ ಬಣ್ಣಬಣ್ಣದ ಆಕರ್ಷಕವಾದ ಮುಚ್ಚಳವಿದೆ. ಮುಚ್ಚಳಕ್ಕೆ ಮುಚ್ಚುವ ಮತ್ತು ತೆರೆಯುವ ಸಾಮಥ್ರ್ಯವಿಲ್ಲ. ಇದು ಕೀಟಗಳನ್ನು ಆಕರ್ಷಿಸುವ ಕಾರ್ಯವನ್ನುಮಾತ್ರ ನಿರ್ವಹಿಸುತ್ತದೆ. ಹೂಜಿಯ ಬಾಯಿ ಬಳಿ ಒಳಮೈಮೇಲೆ ಒಳಮುಖವಾಗಿರುವ ಕೂದಲುಗಳೂ ಒಂದು ಬಗೆಯ ಜಿಡ್ಡುಪದಾರ್ಥವೂ ಇವೆ. ತಳದಲ್ಲಿ ಜೀರ್ಣಕ್ರಿಯೆಯಲ್ಲಿ ನೆರವಾಗುವ ದ್ರವವೊಂದಿದೆ. ಮುಚ್ಚಳದಿಂದ ಆಕರ್ಷಿತವಾದ ಕೀಟ ಇಲ್ಲವೆ ಹುಳು ತೆವಳಿಕೊಂಡು ಬಾಯ ಬಳಿ ಬಂದು ಹೂಜಿಯ ಒಳಗಿನ ದ್ರವವನ್ನು ಮಧು ಎಂದು ಭ್ರಮಿಸಿ ಒಳಕ್ಕಿಳಿದಾಗ ಜಿಡ್ಡು ಪದಾರ್ಥದ ದೆಸೆಯಿಂದ ಜಾರಿ ಒಳಕ್ಕೆ ಜೀರ್ಣಿಸಲ್ಪಟ್ಟು ಕರಗಿಹೋಗುತ್ತದೆ.

 ಸರಸೀನಿಯ, ಡಾರ್ಲಿಂಗ್‍ಟೋನಿಯ ಮುಂತಾದುವುಗಳಲ್ಲಿ ಎಲೆಯ ಮೇಲೆ ಜೇನುತುಪ್ಪದಂತೆ ಸವಿಯಾದ ರಸ ಶೇಖರವಾಗಿದ್ದು ಅದರ ಸವಿಗೆ ಮಾರುಹೋಗಿ ಬಂದು ಬೀಳುವ ಕೀಟಗಳು ಆಹುತಿಯಾಗುತ್ತವೆ. ಪಿಂಗಿಕ್ಯುಲದ ಚಮಚದ ಆಕಾರವುಳ್ಳ ಎಲೆಗಳಲ್ಲಿ ತೊಟ್ಟುಳ್ಳ ಗ್ರಂಥಿಗಳಿರುತ್ತವೆ. ಇವು ಕೀಟಗಳನ್ನೊಂದೇ ಅಲ್ಲದೆ ಗಾಳಿಯಲ್ಲಿ ಬರುವ ಪರಾಗಾಣುಗಳನ್ನೂ ಹಿಡಿದು ಜೀರ್ಣಿಸಿಕೊಳ್ಳುತ್ತವೆ.

 ಕೀಟಭಕ್ಷಕ ಸಸ್ಯಗಳಲ್ಲಿನ ಅತ್ಯಂತ ವಿಚಿತ್ರ ಸಂಗತಿಯೆಂದರೆ ಹಿಡಿದ ಕ್ಭಿಟಗಳನ್ನು ಜೀರ್ಣಿಸಿಕೊಳ್ಳಲು ಪೆಪ್ಸಿನ್, ಟ್ರಿಪ್ಸಿನ್ ಮೊದಲಾದ ಕಿಣ್ವಗಳನ್ನು ಮನುಷ್ಯನಂತೆಯೇ ಸ್ರವಿಸುವುದು. ಸೂಕ್ಷ್ಮದರ್ಶಕ ಯಂತ್ರದಿಂದ ಷೆಂಸ್ಛ್ ಎಂಬಾತ (1963, 1965, 1966) ಶರ್ಕರಮಿಶ್ರಿತ ಅಂಟುದ್ರವವನ್ನು ಸ್ರವಿಸುವ ಫಾಂಗ್ ಷೈಮ್ ಎಂಬ ವಿಶೇಷ ಗ್ರಂಥಿಗಳನ್ನು ನೋಡಿದ. ಈ ಗ್ರಂಥಿಗಳ ಜೀವಕೋಶಗಳಲ್ಲಿನ ಗಾಲ್ಜಿ ವಸ್ತು ಅಂಟುದ್ರವವನ್ನು ಸ್ರವಿಸುವ ಕ್ರಿಯೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆಯೆಂಬುದನ್ನು ಸ್ವಷ್ಟವಾಗಿ ಕಂಡ. ಈ ಗಾಲ್ಜಿವಸ್ತು ಗ್ಯಾಲಕ್ಟೋಸ್ ಅರ್ಯಾಬಿನೋಸ್, ಕ್ಸೈಲೋಸ್, ರ್ಯಾಮ್ನೋಸ್ ವಸ್ತುಗಳನ್ನು ಶೇಖರಿಸಿ ಜೀವಕೋಶಗಳ ಗೋಡೆಗಳೆಡೆಗೆ ಸಣ್ಣ ಸಣ್ಣ ಕೋಶಾಕಾರದಲ್ಲಿ ಬಿಡುಗಡೆಮಾಡುವುದು ಕಾಣಬಂತು. ಈ ಕೋಶಗಳು ಅಡ್ಡಗೋಡೆಗೂ  ಕೋಶಪೊರೆಗೂ (ಪ್ಲಾಸ್ಮಮೆಂಬ್ರೇನ್) ನಡುವೆ ಸೇರಿಕೊಳ್ಳುತ್ತವೆ. ಗ್ರಂಥಿಗಳ ಮೇಲಿನ ಕ್ಯೂಟಿಕಲ್ ಲೇಪದಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು ದ್ರವ ಸರಾಗವಾಗಿ ಹೊರಗೆ ಬರಲು ದಾರಿಯಾಗಿದೆ. ಕಪ್ಪೆ ಚಿಪ್ಪಿನಂತೆ ಮುಚ್ಚಿಕೊಳ್ಳುವ ಕೀಟಗ್ರಾಹಕ ಎಲೆಗಳ ಡೈಯೋನಿಯ ಮತ್ತು ಪಿಂಗಿಕ್ಯುಲಗಳಲ್ಲಿವೆ. ಹುಳುಹುಪ್ಪಟೆಗಳು ಹಾರಿಬಂದು ಎಲೆಗಳ ಮೇಲೆ ಕುಳಿತೊಡನೆ ಎಲೆಗಳು ಮುಚ್ಚಿಕೊಂಡು ಕೀಟಗಳನ್ನು ಹಿಡಿದು ತಿನ್ನುತ್ತವೆ. ಕೀಟ ಸಂಪೂರ್ಣವಾಗಿ ಜೀರ್ಣವಾದ ಅನಂತರ ಎಲೆಗಳು ಹಿಡಿದು ತಿನ್ನುತ್ತವೆ. ಕೀಟ ಸಂಪೂರ್ಣವಾಗಿ ಜೀರ್ಣವಾದ ಅನಂತರ ಎಲೆಗಳು ಮತ್ತೆ ತೆರೆಯುತ್ತವೆ.

(ವಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ